ಮಂಗಳೂರು:
ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಮರೋಳಿ ವಾರ್ಡಿನ ಬಿಜೆಪಿ ಕಾರ್ಯಕರ್ತರು ವಿದ್ಯುತ್ ಸಂಪರ್ಕವಿಲ್ಲದ ಹಳೇ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಯುಗಾದಿಯ ದಿನದಂದು ಮನೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ವರ್ಷವೂ ಬರುವ ಯುಗಾದಿಯು ಈ ಬಾರಿ ವಿಶೇಷವೆನಿಸಿದೆ. ಚಿಮಿಣಿ ದೀಪದಲ್ಲಿ ಬದುಕು ಸಾಗಿಸುತಿದ್ದ ಭಾರತಿ ಗುರುರಾಜ್ ಎಂಬವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅವರ ಮನೆಯಲ್ಲಿ ಯುಗಾದಿ ಹಬ್ಬ ಆಚರಿಸಿದ್ದೇವೆ ಎಂದರು.
ಮಂಗಳೂರು ಆಧುನಿಕತೆಗೆ ತೆರೆದುಕೊಂಡಿದ್ದರೂ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವ ಮನೆಗಳಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ. ಅವರ ದಾಖಲೆಗಳಲ್ಲಿ ಲೋಪದೋಷಗಳಿದ್ದರೆ ಅವೆಲ್ಲವನ್ನೂ ಸರಿಪಡಿಸಿ ತಕ್ಷಣವೇ ಅವರ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಅಂತಹ ಮನೆಗಳು ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ ಇದ್ದರೆ ನಮ್ಮ ಕಾರ್ಯಕರ್ತರನ್ನು ಅಥವಾ ನನ್ನನ್ನು ನೇರವಾಗಿ ಸಂಪರ್ಕಿಸಿದರೆ ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಚಿಂತಿಸಬಹುದು ಎಂದರು.
ಮನಪಾ ಸದಸ್ಯರಾದ ಕೇಶವ ಮರೋಳಿ, ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಕಿರಣ್ ರೈ ಬಜಾಲ್, ಕಿರಣ್ ಮಾರೋಳಿ, ಜಗನ್ನಾಥ ಆಡು ಮನೆ, ಅಜಿತ್ ಡಿ.ಸಿಲ್ವ, ಫೆಡ್ರಿಕ್ ಪೌಲ್, ವಸಂತ್ ಜೆ.ಪೂಜಾರಿ, ರಾಗು, ಸರಳ, ಮಾಲತಿ, ಅರುಣ್, ಅನಿತಾ, ರಂಜಿತ್,ಅಜಿತ್ ಮಾರೋಳಿ ಉಪಸ್ಥಿತರಿದ್ದರು.
Read more at: https://hosadigantha.com/on-the-festival-of-ugadi-mla-vedavyas-kamath-the-legislator-who-illuminates-the-poor-home/
0 Comments