ಮಂಗಳೂರು: ಕೋವಿಡ್ ಸಂಕಷ್ಟದ ಮಧ್ಯೆಯೂ ಮಂಗಳೂರು ನಗರದ ಅಭಿವೃದ್ಧಿಗೆ ಸುಮಾರು 3 ಸಾವಿರ ರೂ. ಅನುದಾನ ತಂದಿದ್ದು, ಹಲವಾರು ಕಾಮಗಾರಿ ಪ್ರಾರಂಭಗೊಂಡಿವೆ. ಇದರಿಂದ 2025ರ ವೇಳೆಗೆ ನಗರದ ಚಿತ್ರಣವೇ ಬದಲಾಗಲಿದೆ ಎಂದು ಶಾಸಕ ವೇದವ್ಯಾಸ ಡಿ.ಕಾಮತ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು.
ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ಅಭಿವೃದ್ಧಿಗೆ 25 ಕೋಟಿ ರೂ., ಪಚ್ಚನಾಡಿ ಹಳೇ ತ್ಯಾಜ್ಯ ಗುಡ್ಡದ ವಿಲೇವಾರಿಗೆ 74 ಕೋಟಿ ರೂ. ಮೊತ್ತ ಮಂಜೂರಾತಿ ಸಿಕ್ಕಿದೆ. ಮಂಗಳೂರು ಹಾಗೂ ಆಸುಪಾಸಿನ ಗ್ರಾಮಸ್ಥರಿಗೆ ದಿನದ 24 ಗಂಟೆ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಜಲಸಿರಿ ಯೋಜನೆ ಕಾಮಗಾರಿ ನಡೆಯುತ್ತಿದೆ. 2025ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.
ಮೀನುಗಾರಿಕೆ ಅಭಿವೃದ್ಧಿಗೆ ಆರು ಕೋಟಿ ರೂ. ವೆಚ್ಚದಲ್ಲಿ ತೇಲುವ ಜೆಟ್ಟಿ, ನಗರದಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವುದನ್ನು ತಡೆಗಟ್ಟಲು 35 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಯ ಇಕ್ಕೆಲಗಳಲ್ಲೂ ಆವರಣ ಗೋಡೆ ನಿರ್ಮಿಸಲಾಗುವುದು ಎಂದರು.
ಹಿಂದಿನ ಶಾಸಕರ ಅವಧಿಯಲ್ಲಿ ಉರ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಶಿಲಾನ್ಯಾಸ ನಡೆದಿತ್ತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಬಂದ 10 ಕೋಟಿ ರೂ. ಅನುದಾನ ಹಿಂದಕ್ಕೆ ಹೋಗಿತ್ತು. ಅದನ್ನು ತರಿಸುವ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.
400 ಕೋಟಿ ರೂ. ಎಡಿಬಿ ಸಾಲ ಯೋಜನೆಯ ಮೂಲಕ ನಗರದಲ್ಲಿನ ಹಳೇ ಯುಜಿಡಿ ವ್ಯವಸ್ಥೆ ಅಭಿವೃದ್ಧಿ ನಡೆಯುತ್ತಿದೆ. ಹಳೆ ಬಸ್ ನಿಲ್ದಾಣದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಗೆ ಟೆಂಡರ್, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ 120 ಕೋಟಿ ರೂ. ಕಾಮಗಾರಿ ಟೆಂಡರ್ ಮುಗಿದಿದೆ. 11 ಅಂತಸ್ತುಗಳ ಸೆಂಟ್ರಲ್ ಮಾರ್ಕೆಟ್ ನಿರ್ಮಾಣ ಪ್ರಕ್ರಿಯೆಗೆ ಕೋರ್ಟ್ ತಡೆಯಾಜ್ಞೆ ಅಡ್ಡಿಯಾಗಿದೆ. ವೆನ್ಲಾಕ್ ಆಸ್ಪತ್ರೆಗೆ 200 ವೆಂಟಿಲೇಟರ್ ಬೆಡ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಇಬ್ರಾಹಿಂ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಟಿಡಿಆರ್ ಸೆಲ್ ರಚನೆ: ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ಸತಾಯಿಸದೆ ಸುಲಭವಾಗಿ ಟಿಡಿಆರ್ ಕೊಡುವ ಉದ್ದೇಶದಿಂದ ಮಹಾನಗರ ಪಾಲಿಕೆಯಲ್ಲಿ ಟಿಡಿಆರ್ ಸೆಲ್ ಆರಂಭಿಸಲಾಗಿದೆ. ನಿವೃತ್ತ ಶಿರಸ್ತೇದಾರ್, ಎಟಿಪಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಶಾಸಕರು ಹೇಳಿದರು.
ಟೈಗರ್ ಕಾರ್ಯಾಚರಣೆ
ನಗರದ ಬೀದಿಬದಿ ವ್ಯಾಪಾರವು ತಳ್ಳುಗಾಡಿಗಳಿಗೆ ಮಾತ್ರ ಸೀಮಿತ. ಒಂದು ಕಡೆ ನಿಂತು ವ್ಯಾಪಾರ ಮಾಡುವಂತಿಲ್ಲ. ಸಂಚಾರ ಸಹಿತ ಸಾರ್ವಜನಿಕರಿಗೆ ತೊಂದರೆ ಮಾಡುವ ಎಲ್ಲ ಬೀದಿ ವ್ಯಾಪಾರ ತೆರವು ಮಾಡಲು ಟೈಗರ್ ಕಾರ್ಯಾಚರಣೆ ನಡೆಯಲಿದೆ. ಜನರ ಸಹಕಾರ ಅಗತ್ಯ ಎಂದು ಶಾಸಕ ಕಾಮತ್ ತಿಳಿಸಿದರು.
ಮಂಗಳೂರಿನಲ್ಲಿ ಫಿಲಂ ಸಿಟಿ
ಕೇಂದ್ರ ಸರಕಾರದ ಯೊಜನೆಯಂತೆ ನೇತ್ರಾವತಿ ನದಿಯ ಎರಡು ಕುದ್ರುಗಳಲ್ಲಿ ಫಿಲಂ ಸಿಟಿ ನಿರ್ಮಾಣ ಸಹಿತ ಕುದ್ರುಗಳ ಅಭಿವೃದ್ಧಿಯನ್ನು ಮೆರಿಟೈಂ ಬೋರ್ಡ್ ಅಥವಾ ಕೇಂದ್ರ ಸರಕಾರದ ನೆರವಿನಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
Read more at: https://vijaykarnataka.com/news/mangaluru/rs-3000-crore-grant-for-mangaluru-says-vedavyas-kamath/articleshow/86783313.cms
0 Comments